
ಅಂದು ಆಫೀಸಿಗೆ ಹೋಗಿದ್ದೆ. ಕೆಲಸದ ಸಲುವಾಗಿ ನವೆಂಬರಿನಲ್ಲಿ ಜರ್ಮನಿಗೆ ಹೋಗಬೇಕು. ವೀಸಾ ಸಲುವಾಗಿ ಸ್ವಲ್ಪ ತಲೆ ಬಿಸಿಯಾಗಿತ್ತು . ನನಗೆ ಕಚೇರಿಯಿಂದ ವೀಸಾ ಅಪ್ಪೋಯಿಂಟ್ಮೆಂಟ್ ಕೊಡುತ್ತಿರಲಿಲ್ಲ. ಆಗಸ್ಟ್ ಅಲ್ಲೇ ಎಲ್ಲ ಡಾಕ್ಯುಮೆಂಟ್ಸ್ ರೆಡಿ ಇದ್ದರು ಏನೋ ಮುಂದೆ ಹೋಗುತ್ತಿರಲಿಲ್ಲ , ಒಂಥರಾ ಅಸಮಾಧಾನ, ಬೇಜಾರು. ಇನ್ನು ಬೇಗ ರೆಡಿ ಮಾಡಬೇಕಿತ್ತೇನೋ ಏನೋ ಎಂದು .ನನ್ನ ಜೊತೆ ಪ್ರಯಾಣ ಮಾಡುವವರ ವೀಸಾ ಈಗಾಗಲೇ ಬಂದಾಗಿತ್ತು. ನನ್ನದಷ್ಟೇ ತಡವಾಯಿತು, ಯಾರು ಏನನ್ನುವರೋ, ಜವಾಬ್ದಾರಿಯಿಲ್ಲ ಎಂದು ತಿಳಿಯುತ್ತಾರೋ ಎಂದು ಮನಸ್ಸು ಕೊರಗುತಿತ್ತು. ಈ ಯೋಚನೆಯಲ್ಲಿ ಸದಾ ನನ್ನ ಆಪ್ತನಾದ ತಲೆ ನೋವು ಬೇರೆ ಬಂದಿದ್ದ. ಮಲಗುವಾಗ ತುಂಬಾ ಅಶಾಂತಿ, ಅಸಮಾಧಾನದಿಂದಲೇ ಮಲಗಿದೆ. ಸರಿಯಾದ ನಿದ್ದೆ ಬರಲಿಲ್ಲ.
ಮರುದಿನ ಏಳುವಾಗಲೂ ತಲೆ ನೋವು. ಆದರೂ ಏಳಲೇಬೇಕು, ಮಗನಿಗೆ ತಿಂಡಿ ಊಟ ಮಾಡಿ ಶಾಲೆಗೆ ಕಳುಹಿಸಬೇಕು. ಎಲ್ಲ ತಯಾರು ಮಾಡಿ, ಅವನನ್ನು ಶಾಲೆಗೆ ಕಳುಹಿಸಿ ಮತ್ತೆ ಮಲಗಿದೆ. ನಿದ್ದೆಯೂ ಬರುತ್ತಿಲ್ಲ ಏಳಲೂ ಆಗುತ್ತಿಲ. ಏನೋ ಚಡಪಡಿಕೆ, ವೀಸಾ ಸಲುವಾಗಿ. ಈ ತಲೆನೋವಿನ ಮಧ್ಯೆಯೂ ಮೊಬೈಲ್ ನೋಡುವ ಚಟ ಬೇರೆ. ಫೇಸ್ಬುಕ್ ತೆರೆದೆ. ಒಂದು ಬರಹ ಹೊಂಪೇಜಿನಲ್ಲಿ..ಆ ಅಕೌಂಟ್ ಅನ್ನು ನಾನು ಇಂದಿನವರೆಗೂ ನೋಡಿಯೇ ಇರಲಿಲ್ಲ. ಆತನು ಬರೆದಿಟ್ಟ ಒಂದಷ್ಟು ಸಾಲುಗಳನ್ನು ಓದಲು ಶುರು ಮಾಡಿದೆ. ಅವರ ಮೂರು ವರ್ಷದ ಮಗಳನ್ನು ಆಸ್ಪತ್ರೆಗೆ ಕರೆ ತಂದಿದ್ದರು, ಅವಳಮ್ಮನನ್ನು ನೋಡಲು. ಆದರೆ ಏನು ಅರಿವಿಲ್ಲದೆಯೇ ಮಲಗಿದ್ದ ತನ್ನಮ್ಮನನ್ನು ನೋಡುವುದು ಆ ಮಗುವಿನ ಅರಿವಿಗೆ ಮೀರಿದ್ದು, ಮನೆಗೆ ಹೋಗೋಣವೆನ್ನುತ್ತಾಳೆ ಎಂದು ಬರೆದುಕೊಂಡಿದ್ದರು. ಇನ್ನು ಸ್ವಲ್ಪ ಮುಂದೆ ಅವರ ಬರಹಗಳನ್ನು ನೋಡಿ ನನಗರ್ಥವಾಗಿದ್ದು ಆತನ ಮಡದಿಗೆ ಸ್ವಲ್ಪ ತಿಂಗಳುಗಳ ಹಿಂದೆ ಅಪಘಾತವಾಗಿದ್ದು, ಅವರು ಅಂದಿನಿಂದ ಹೀಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆಂದು.
ಒಮ್ಮೆಲೇ ತಲೆ ತಿರುಗಿದಂತಾಯಿತು, ಸಂಕಟವಾಯಿತು. ನನ್ನದು ಒಂದು ಕಷ್ಟವೇ ಅಲ್ಲ ಅನಿಸಿತು. ವೀಸಾ ಬರದಿದ್ದರೆ ನಾನು ಕಳೆದುಕೊಳ್ಳುವುದಾದರೂ ಏನೋ? ಜೀವನ್ಮರಣದ ಹೋರಾಟದಲ್ಲಿ ಜನ ಇದ್ದಾರೆ, ನನ್ನ ತಲೆ ನೋವು ಒಮ್ಮೆಲೇ ಮಾಯವಾಯಿತು..ಆ ತಾಯಿಯನ್ನು ದೇವರು ಕಾಪಾಡಲಿ ಎಂದು ಪ್ರಾಥಿಸಿಕೊಂಡೆ, ಮತ್ತೆ ಎದ್ದು ನನ್ನ ಕೆಲಸಗಳಲ್ಲಿ ತೊಡಗಿಕೊಂಡೆ.
Leave a comment